ಚೇಂಜ್‌ ಆಫ್ ಗಾರ್ಡ್ಸ್‌

ಇತ್ತೀಚೆಗೆ ನಮ್ಮನ್ನಗಲಿದ ಪ್ರಸಿದ್ಧ ಸಾಹಿತಿ, ಕಲಾವಿದ ಆರ್ಯರ ನೆನಪಿನಲ್ಲಿ ಈ ಕತೆ- ಅವರದ್ದೇ "ಹೈಬ್ರಿàಡ್‌ ಕತೆಗಳು' ಸಂಕಲನದಿಂದ ಆಯ್ದುಕೊಂಡದ್ದು.
ಎರಡನೇ ಮಹಾಯುದ್ಧ ಮುಗಿದು ಎರಡು ವರ್ಷ ಕಳೆದಿತ್ತು. ಎಂದಿನಂತೆ ಲಂಡನ್‌ನ ಜಗತøಸಿದ್ಧ ಬಕ್ಕಿಂಗ್‌ ಹಾಮ್‌ ಅರಮನೆಯ ದಿವ್ಯ ಮಹಾದ್ವಾರದಲ್ಲಿ ಬೆಳಿಗ್ಗೆ 11.30 ಗಂಟೆಗೆ "ಚೇಂಜ್‌ ಆಫ್ ಗಾರ್ಡ್ಸ್‌' ಕಾರ್ಯಕ್ರಮ ಭವ್ಯವಾಗಿ ನಡೆದಿತ್ತು. ಯಥಾವತ್‌, ವಿಶ್ವದ ಎಲ್ಲೆಡೆಯಿಂದ ಬಂದ ಸಹಸ್ರಾರು ಪ್ರೇಕ್ಷಕರು. 1703ರಲ್ಲಿ ಬಕ್ಕಿಂಗಹಾಮ್‌ ಡ್ನೂಕ ಕಟ್ಟಿದ್ದ ಅರಮನೆಯಲ್ಲಿ ಸೂರ್ಯಮುಳುಗದ ಸಾಮ್ರಾಜಿn ವಿಕ್ಟೋರಿಯಾ 1837ರಲ್ಲಿ ವಾಸಿಸತೊಡಗಿ, ಅಂದಿನಿಂದ ಇಂದಿನತನಕ ಅದರಿದಿರು ಕರೆಕ್ಟ್ 11.30ಗೆ ನಡೆಯುವ ಗಾರ್ಡ್ಸ್‌ ಚೇಂಜುವ ಕಾರ್ಯಕ್ರಮ ಒಂದು ದಿನವೂ ತಪ್ಪಿಲ್ಲ !
ಹಿಟ್ಲರನ ಬಾಂಬರುಗಳು ಲಂಡನ್‌ನ್ನು 40 ದಿನ ಕುಟ್ಟುತ್ತಿದ್ದಾಗಲೂ ಈ ಗಾರ್ಡ್‌ಗಳ ಮಾರ್ಚ್‌ ಅನೂಚಾನ ನಡೆದಿತ್ತು ಎಂದಾಗ ಅದರ ಮಹತ್ವ ತಿಳಿಯುತ್ತದೆ. ಈ ಗಾರ್ಡುಗಳ ಕಾರ್ಯನಿಷ್ಠೆ, ಅಪಾರ ಧೈರ್ಯ ನೋಡಿ ಉಳಿದೆಲ್ಲ ಇಂಗ್ಲಿಷ್‌ ಬೆಟಾಲಿಯನ್‌ಗಳೂ ಹೀಗೇ ಇರಬೇಕೆಂದು ಹಿಟ್ಲರ್‌ಗೆ ಸಂದೇಹ ಬಂದಂದಿನಿಂದ ಜರ್ಮನಿ 2ನೇ ಯುದ್ಧದಲ್ಲಿ ಸೋಲತೊಡಗಿತೆಂದು ಇಂದೂ ಅನ್ನುವ ಕೆಲ ವಯಸ್ಸಾದ ಇಂಗ್ಲಿಷ್‌ ಜಂಟಲ್‌ವುನ್‌ರು ಇದ್ದಾರಂತೆ. ಈ ಗಾರ್ಡ್ಸ್‌ ಚೇಂಜಾಗುವ ಈ ರಿಚುವಲ್‌ನ್ನು ಒಂದು ಘನಸಂಕೇತವಾಗಿ ನೂರಾರು ವರುಷ ನಿರಂತರ ನಡೆಸಿ ತಂದ ಇಂಗ್ಲಿಷರ ದಕ್ಷ ಧೀರ ಪಟ್ಟಿನೆದುರು ನಮ್ಮದೇನೂ ನಡೆಯದೆಂದು ಪ್ರಪಂಚದ ಡಜನಾನು ಕಿರೀಟತಲೆಗಳು ಬಾಗಿದಾಗ, ವಿಶ್ವದಾದ್ಯಂತ ಬ್ರಿಟಿಷ್‌ ವಸಾಹತು ಮೊಳೆತವೆಂದು, ಹೈಡ್‌ಪಾರ್ಕಿನಲ್ಲಿ, ಥೇಮ್ಸ್‌ ದಂಡೆಯಲ್ಲಿ ಬಿಸಿಲ ವಾಕಿಂಗ್‌ನಲ್ಲಿ ನೆಕ್‌ಟೈ ತೀಡುತ್ತಾ ಇಂಗ್ಲಿಷ ಹಿರೇರು ಇನ್ನೂ ಅನ್ನುತ್ತಾರಂತೆ.
ಈ ಚೇಂಜ್‌ ಆಫ್ ಗಾರ್ಡ್ಸ್‌ ನಡಿಯೂದು ದಿವ್ಯ ಅರಮನೆಯ ಕಾಂಪೌಂಡಿನ ಭವ್ಯ ಅಂಗಳದಲ್ಲಿ. ಸಿಂಹಾಸನಕೋಣೆ, ಲೈಬ್ರರೀ, ಶಿಲ್ಪಗ್ಯಾಲರೀ, ನೀಲ ಬಿಳಿ ಡ್ರಾಯಿಂಗ್‌ ರೂಮ್‌, ಡಜನ್‌ ಬಾತ್‌ರೂಮ್‌ ಎಂದು 600 ಕೋಣೆಗಳ 40 ಎಕ್ರೆ ಹಬ್ಬಿದ ಲಂಡನ್‌ನ ಅರಮನೆ. ನೂರಾರು ದೇಶಗಳ ದೊರೆಗಳು ಕಿರೀಟಕಳಚಿ ಹ್ಯಾಟ್‌ ಹಾಕಿ ಇಂಗ್ಲಂಡ್‌ ರಾಣಿಗೆ ಶಿರಬಾಗಿದ ಅರಮನೆ. ಹಿಟ್ಲರನ ಕಿರಿಕಿರಿಯೊಂದು ಇಲ್ಲವಾಗಿದ್ದಲ್ಲಿ ಆ ನೂರಾರು ಅರಸರ ಮರಿ ಮೊಮ್ಮಕ್ಕಳು ಇಂದೂ ತಲೆಬಾಗಬಹುದಾಗಿದ್ದ ಅರಮನೆ. ಇದರ ಇದಿರು ಅಂಗಳದಲ್ಲಿ ಬಿಗ್‌ಬೆನ್‌ ಗಡಿಯಾರ ಕರೆಕ್ಟ್ 11.30 ಬಡಿದಾಗ ಗಾರ್ಡ್ಸ್‌ ಚೇಂಜುವ ವಿಧಿವಿಧಾನ ಚಾಲೂ ಆಗುತ್ತದೆ. ಗೇಟಿನ ಹೊರಗೆ ವಿಕ್ಟೋರಿಯಾ ಮೆಮೋರಿಯಲ್‌ನ ಸಿಂಹ, ಸ್ವಾತಂತ್ರ್ಯದೀವಿಗೆ ದೇವಿ, ಹೂಬಳ್ಳಿ ಶಿಲ್ಪಗಳ ಆಜುಬಾಜೂ ನೆರೆದ ಪ್ರೇಕ್ಷಕ ಮಂಡಲಿಗೆ ದಾರಿತೋರುತ್ತ ನಿಯಂತ್ರಿಸುತ್ತ ಅಶ್ವಾರೋಹೀ ಪೊಲೀಸರ ಭಾರೀ ಕುದುರೆಗಳ ಗೊರಸು, ಸುತ್ತಲ ನೆಲ ವಸಾಹತುಗಳ್ಳೋ ಎಂಬಂತೆ ನೆಲ ಬಡಿಯುವಾಗ ಅಂಗಳದೊಳಗಿನ ಮುಖ್ಯ ಕಾರ್ಯಕ್ರಮಕ್ಕೆ ಮುನ್ನುಡಿಯಾಗುತ್ತದೆ.
ಆರ್ಕೆಸ್ಟ್ರಾ ಮಾಸ್ತರರ ಸನ್ನೆಕೋಲಿನ ಬೀಸಿಗೆ ಪೀಪಿ ಊದುತ್ತ ಡ್ರಂ ಬಡೆಯುತ್ತ ಸಾರ್ಜೆಂಟಿನ ಕಡಕ್‌ ಅಣತಿಗೆ ಹೆಜ್ಜೆ ಹೊಡೆಯುತ್ತ ಒಂದು ಪ್ಲಾಟೂನ್‌ ಪ್ಯಾಲೇಸ್‌ ಗಾರ್ಡುಗಳು ಬಲಗಡೆಗೆ ಮಾರ್ಚ್‌ ಮಾಡುತ್ತಾರೆ. ಡಿಟ್ಟೋ, ಇನ್ನೊಂದು ಪ್ಲಾಟೂನ್‌ ಬಲದಿಂದ ಎಡಕ್ಕೆ ಈ ಗಾರ್ಡುಗಳು ಅರಮನೆಯ ಕಾವಲ ಏಕಮೇವ ಧ್ಯೇಯದ ವಿಶೇಷ ಸೈನಿಕರು ಕರಡಿತುಪ್ಪಳದಂಥ 2 ಫೀಟು ಉದ್ದ ಟೋಪಿ, ಪದಕರಾಜಿತ ಕೆಂಪು ಕೋಟು ಕರಿ ಚೊಣ್ಣ ಬೂಟುಗಳಲ್ಲಿ ಶತಮಾನಗಳಿಂದ ಎತ್ತರ ಕಾಲೆತ್ತಿ ನೆಲಬಡಿದು ನಡೆಯುವ ಗಾರ್ಡುಗಳು. ಎಡದಿಂದ ಧಪ್‌ಧಪ್‌ ಎಂದು ಆನ್‌ವರ್ಡ್‌ ಮಾರ್ಚ್‌ನಲ್ಲಿ ಬಲಪ್ಲಾಟೂನನ್ನು ಸಂಧಿಸಿ, ನಡುನಡುವೆ ಕೆಲಗಾರ್ಡುಗಳು ಪ್ರೇಕ್ಷಕರ ಕಡೆ ಧಿಪ್‌ ಧಿಪ್‌ ನಡೆದು ತಲವಾರು ಮೇಲೆತ್ತಿ ಕೆಳಬೀಸಿ, ಬೇಲಿಯ ಕಬ್ಬಿಣ ಸರಳು ನಡುವೆ ಕಾಜಿನ ಕಣ್ಣಿಂದ ಬೊಂಬೆಯಂತೆ ಪ್ರೇಕ್ಷಕರನ್ನು ದಿಟ್ಟಿಸಿದಾಗ, ಐಸ್‌ಕೀಂ ಚೀಪುವ, ಟಾಪಿ ಕಡಿಯುವ, ಚೂಯಿಂಗ್‌ ಮೆಲುಕಾಡುವ ವಿಶ್ವಪ್ರೇಕ್ಷಕರು ಮೆಲ್ಲುವುದು ನಿಲ್ಲಿಸಿ ಬೆರಗಾಗಿ ನಿಲ್ಲುವರು. ಕಟ್ಟಕಡೆಗೆ ಎಡಬಲ ಪ್ಲಾಟೂನ್‌ಗಳು ಮುಖಾಮುಖೀಯಾಗಿ, ಮುಂದಿನ ದಿನ ಅರಮನೆಯನ್ನು ಕಾಯುವ ಮಹಾಜವಾಬ್ದಾರಿಯನ್ನು ಪಾಳಿಯ ಇನ್ನೊಬ್ಬರಿಗೆ ಅರ್ಪಿಸಿ ಎಬೌಟ್‌ ಟರ್ನ್ ಆದಾಗ ಡ್ರಂಗಳ ಸಂಗೀತ ಚರಮಕ್ಕೆ ಮುಟ್ಟಿದಾಗ, ಪ್ರೇಕ್ಷಕರ ಅಪಾರ ಹೃದಯೋದ್ಗಾರದೊಡನೆ ಕಾರ್ಯಕ್ರಮ ಮಂಗಲಗೊಳ್ಳುತ್ತದೆ.
.
ಎರಡನೇ ಯುದ್ಧ ಮುಗಿದ ಎರಡು ವರ್ಷದ ನಂತರ, ಕುಲು ಬಿಸಿಲಿನ ಸಮ್ಮರ್‌ನ ಒಂದು ಮುಂಜಾನೆ ಎಂದಿನಂತೆ ಗಾರ್ಡು ಚೇಂಜಿನ ಕಾರ್ಯಕ್ರಮ ಸುರಳೀತ ನಡೆದಿತ್ತು. ಎಂಥಾ ಮಹಾ ಉತ್ಸವದಲ್ಲೂ ಅಲ್ಲೊಂದು ಇಲ್ಲೊಂದು ಮೂಲೆಯಲ್ಲಿ ಚಿಲ್ಲರೆ ಘಟನೆಗಳು ನಡೆಯುವಂತೆ ಪ್ಯಾಲೇಸ್‌ನ ಬಾಜೂ ಇರುವ ಗ್ರೀನ್‌ ಪಾರ್ಕಿನಲ್ಲೂ ಒಂದು ಬಿಡಿ ಪ್ರಸಂಗ ನಡೆದಿತ್ತು. ಗ್ರೀನ್‌ ಪಾರ್ಕ್‌ ನೂರಾರು ಎಕರೆಯ ಪೈನ್‌, ಬರ್ಚ್‌, ಮೇಫ್ಲವರ್‌, ಮೇಪಲ್ಸ್‌ ಮುಂತಾದ ಶತಮಾನ ಬೇರಿಳಿದ ನೆರಳು ಬೀರುವ ಮರಗಳಿಂದ ತುಂಬಿದ ಪ್ರೇಕ್ಷಣೀಯ ಉದ್ಯಾನ. ಥೇಮ್ಸ್‌ ನದಿ, ಲಂಡನ್‌ ಬ್ರಿಜ್‌, ಶೇಕ್ಸ್‌ ಪಿಯರ್‌ ಥೇಟರು, 1215ನೇ ಇಸವಿಯ ಬಾಗ್ನಾಕಾರ್ಟ್‌, 1649ರಲ್ಲಿ ದಬ್ಟಾಳಿಕೆಯ ಚಾರ್ಲ್ಸ್‌ 1 ದೊರೆಯನ್ನು ಹತ್ಯೆಮಾಡಿ ಕ್ರಾಮ್‌ವೆಲ್ಲರ ನಾಯಕತ್ವದಲ್ಲಿ ಅರಮನೆಗಿಂತಲೂ ಪಾರ್ಲಿಮೆಂಟೇ ಮೇಲೆಂದು ಪ್ರಪಂಚಕ್ಕೆ ಪ್ರಜಾಸತ್ತೆಯನ್ನು ಬೋಧಿಸಿದ ಗುಡಿಯಾದ ವೆಸ್ಟ್‌ಮಿನಿಸ್ಟರ್‌ ಅಬ್ಬೀ ಮಹಾಮನೆ, ವಿಷಯ, ಮಂದಿ ಇದ್ದರೂ ಇಲ್ಲದಿದ್ದರೂ ಮುಕ್ತವಾಗಿ ಏನೂ ಭಾಷಣ ಮಾಡಬಹುದಾದ ವಿಚಾರ ಸ್ವಾತಂತ್ರ್ಯದ ಕಡುಸಂಕೇತವಾದ ಹೈಡ್‌ಪಾರ್ಕ್‌ ಮುಂತಾದುವನ್ನು ಟೂರಿಸ್ಟರು ತಪ್ಪದೇ ಸಂದರ್ಶಿಸುವಂತೆ, ಖಾತ್ರಿಯಾಗಿ ವಿಸಿಟು ಮಾಡುವ ಇನ್ನೊಂದು ಸ್ಥಳ ಈ ಗ್ರೀನ್‌ಪಾರ್ಕ್‌. ಅಂತೆಯೇ, ಮುಂಜಾನೆ ಬಿಸಿಲು ಸ್ನಾನ, ಸಂಜೆ ವಾಕಿಂಗ್‌, ಹುಡುಗ ಹುಡುಗಿಯರ ಮೀಟಿಂಗು ಮುಂತಾದ್ದಕ್ಕೆ ತಾಣವಾದ ಈ ಪಾರ್ಕು ಎಂದೂ ಜನರಿಂದ ತುಂಬಿರುತ್ತಿತ್ತು. ಟೂರಿಸ್ಟರು ಅಂದಮೇಲೆ ವಸಾಹತುಗಳಿಂದ ಬಂದ ಕರೀ, ಕರಿಬಿಳಿ, ಕಂದು ಜನರೂ ತುಂಬಿರುತ್ತಿದ್ದರು. ಅಲ್ಲದೆ ವೆಸ್ಟ್‌ಇಂಡೀಸ್‌ನಿಂದ ಕೂಲಿಗಳು ದುಡ್ಡುಮಾಡಿ ಲಂಡನಿಗೆ ಜಿಗಿದು ಬಂದವರು, ಇಂಡಿಯಾದ ವೈಸ್‌ರಾಯ್‌ ಕಲೆಕ್ಟರು ಮುಂತಾದವರು ಇಂಗ್ಲೆಂಡಿಗೆ ಮರಳುವಾಗ ಜತೆತಂದ ಅಡುಗೆ ಪಡುಗೆಯವರು, ಇಂಡಿಯಾದಿಂದ ಬಾರ್‌ಎಟ್‌ಲಾ, ಆಕ್ಸ್‌ಫ‌ರ್ಡ್‌ ಅಧ್ಯಯನ ಮುಂತಾಗಿ ವಲಸೆ ಬಂದ, ಸೌತ್‌ಹಾಲ್‌ ನೆರೆಕರೆಯಲ್ಲಿ ಜಮಾಯಿಸಿದ್ದ ಲಕ್ಷಗಟ್ಟಲೆ ಜನರಲ್ಲಿ ಅನೇಕರು ಈ ಪಾರ್ಕಿಗೆ ಅಡ್ಡಾಡಲು ಬರೂದು, ಅದೊಂದು ಇಂಗ್ಲೆಂಡಿನ ಮಲ್ಟಿಕಲ್ಚರಲ್‌ ಉದಾತ್ತ ಮನೋಭಾವವನ್ನು ಪ್ರತಿನಿಧಿಸುತ್ತಿತ್ತು.
ಆ ಉದಾತ್ತ ಭಾವಕ್ಕೆ ಅಲ್ಲಿ ಗುಜರಾತದಿಂದ ಬಂದು, ಹೊಟ್ಟೆ ಬೆಲ್ಟಿನ ಮೇಲೆ ಹೆಗಲಿಂದ ಜೋತುಬಿದ್ದ ಕಲಾಮತ್ತಿನ ರಾಜಸ್ತಾನೀ ಬುಟ್ಟಿಯಲ್ಲಿ, ಇಂಡಿಯಾದ ಹುರಿದ ಶೇಂಗಾ, ಪುಟಾಣಿಗಡಲೆ, ಗುಜರಾತೀ ಮಿಠಾಯಿಗಳೊಡನೆ ಇಂಗ್ಲೆಂಡಿನ ಫಿಶ್‌ ಎಂಡ್‌ಚಿಪ್ಸ್‌, ಮಿಂಟ್‌, ಬಿಸ್ಕತ್ತು ಇತ್ಯಾದಿ ನಡೆಯುತ್ತಾ ಪಾರ್ಕಿನಲ್ಲಿ ಮಾರುವ, ಇಂಗ್ಲಿಷರಂತೆಯೇ ದೊಗಳೆ ಪ್ಯಾಂಟು ಕೋಟು ಹ್ಯಾಟು ಧರಿಸಿದ ಯುವಕ ಲಚಮನ್‌ ಭಾç ಸಾಕ್ಷಿ. ಓರಿಯಂಟಲ್‌, ಎಕ್ಸಾಟಿಕ್‌, ಕುತೂಹಲ, ತಮ್ಮ ವರ್ಣೀಯನೆಂದು, ರೇಸಿಸಂ ಇರಬಾರದೆಂದು, ಎಲ್ಲಾ ಜನ ಧಾರಾಳವಾಗಿ ಖರೀದಿಸುತ್ತಿದ್ದುದರಿಂದ ಲಚಮನ್‌ಭಾç ವ್ಯಾಪಾರ ಒಳ್ಳೇ ಲಾಭದಾಯಕವಾಗಿ ನಡೆದಿತ್ತು. ಆದರೆ, ಇಡೀ ಗಾರ್ಡನಿಗೇ ಮೊನೋಪೊಲಿಯಾಗಿದ್ದ ಲಚಮನ್‌ನ ದಂಧೆಗೆ ಈ ಒಂದು ದಿನ ಕುತ್ತು ಬಂದಿತ್ತು! ಅವನಂತೆಯೇ ಉಡುಗೆ ಧರಿಸಿ, ಅಂತೇ ಇರುವ ಬುಟ್ಟಿಯಲ್ಲಿ, ಅದೇ ತಿಂಡಿತಿನಸುಗಳನ್ನು ಮಾರುವ, ಅವನದೇ ಮೈಬಣ್ಣದ ಇನ್ನೊಬ್ಬ ಯುವಕ ಹಾಜರಾಗಿದ್ದ!
ಕೇಳಬೇಕೇ! ಎರಡು ಟಗರುಗಳಂತೆ ಹಣಾಹಣಿ ಶುರುವಾಯ್ತು. ಲಚಮನ್‌ಗೆ ಹೊಟ್ಟೆಪಾಡಿಗೇ ಕುತ್ತು ಬಂದಿರುವಾಗ ಸಹಜವಾಗೇ ಸಿಟ್ಟು ಉಕ್ಕಿ, ಜಂಟಲ್‌ವುನ್‌ ಲಂಡನ್‌ನಲ್ಲಿ ಮೈಕೈ ಮಾಡಿ ಜಗಳಾಡೂದು ಉಚಿತವಲ್ಲವೆಂಬುದು ಮರೆತು ಹೊಸಬನ ಬುಟ್ಟಿ ಕುಟ್ಟಿ ಶೇಂಗಾ ಚೆಲ್ಲಿ ಶರ್ಟು ಹಿಡಿದಾಗ, ಸಂಜೆ ವಾಕಿಂಗಿಗೆ ಬಂದಿದ್ದ ಹೌಸ್‌ ಆಫ್ ಲಾರ್ಡ್ಸ್‌ನ ಎಂಪಿ, ಲಾರ್ಡ್‌ ಎಡ್ವರ್ಡ್‌ರು ಬಂದು, "ನೋನೋ, ಡೀಸೆಂಟಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು, ಬಾಯ್ಸ' ಎಂದಾಗ, ಇಬ್ಬರೂ ಶಾಂತರಾದರು. ಹತ್ತು ನಿಮಿಷ ಮಾತಿಲ್ಲದೆ ಆಜೂಬಾಜು ಕುಂತು ಅವರಿಬ್ಬರೂ "ನೀ ಕಹಾಂಸೇ ಆಯೇ?', "ತುಂ ಕಹಾಂಸೇ ಬಂದೀ?' ಎಂದು ವಿಚಾರವಿನಿಮಯಿಸಿದಾಗ, ಲಚಮನ ಸೂರತ್‌ನಿಂದ ಬಂದವನೆಂದೂ, ಹೊಸಬ ಲತೀಫ‌ ಲಾಹೋರಿನಿಂದ ಬಂದವನೆಂದೂ ಅವರಿಬ್ಬರನ್ನೂ ಸೇಲ್ಸ್‌ಮನ್‌ ಮಾಡಿದ ಕಾಮನ್‌ ಮಾಲಕನು ಚಂಡೀಗಢದ ಗುರುಮಿತ್‌ಸಿಂಗ್‌ಭಲ್ಲಾ ಎಂದೂ ತಿಳಿದಾಗ, ಇಬ್ಬರೂ ಪರಮಾಶ್ಚರ್ಯಗೊಂಡು ಸಂತಸದಿಂದ ಇಂಗ್ಲಿಷ್‌ ಪದ್ಧತಿಯಲ್ಲಿ ಶೇಕ್‌ಹ್ಯಾಂಡ್‌ ಮಾಡಿದಾಗ, ದೂರದಿಂದ ಲಾರ್ಡ್‌ ಎಡ್ವರ್ಡ್‌ರು ಮುಗುಳ್ನಕ್ಕರು. ಅವರ ಮಂದಹಾಸಕ್ಕೆ ಡಬ್ಬಲ್‌ ಪರ್ಪಸ್ಸೂ ಇತ್ತು, ಯಾಕೆಂದರೆ, ಅದೇ ಹೊತ್ತಿಗೆ ಪಾರ್ಕಿನ ಗೇಟಿನಿಂದ ಅವರ ಗೆಳತಿ ಸಿಂಥಿಯಾ ಲಾರೆನ್‌ ಕೈಬೀಸುತ್ತ ಒಳಬರುತ್ತಿದ್ದಳು.
ಮತ್ತೆ ಈ ಇಂಡಿಯಾದ ಹುಡುಗರ ಕಡೆ ಬರೋಣ. ಇವರ ಮಾತಿನಂತೆ ಮರುದಿನ ಕಾಮನ್‌ ಮಾಲಕ ಗುರುಮಿತ್‌ ಭಲ್ಲಾರು ತಮ್ಮ ಹೊಸದಾಗಿ ಖರೀದಿಸಿದ ರಾಲ್ಸರಾಯ್ಸ ಕಾರಲ್ಲಿ ಪಾರ್ಕಿಗೆ ಬಂದು ಇಬ್ಬರು ಹುಡುಗರನ್ನೂ ಸಮಜಾಯಿಸಿ, ಅವರಿಬ್ಬರೂ ದಿನಬಿಟ್ಟು ದಿನದ ಪಾಳಿಯಲ್ಲಿ ವ್ಯಾಪಾರ ಮಾಡಬೇಕೆಂದು ಅಣತಿ ಮಾಡಿದರು. ಬಿಗ್‌ಬೆನ್ನಲ್ಲಿ ಸಂಜೆ 6 ಹೊಡೆದಾಗ ಲಚಮನ್‌ ಲತೀಫ‌ಗೆ ಮರುದಿನ ಲತೀಫ‌ ಲಚಮನ್‌ಗೆ ಬುಟ್ಟಿ ಒಪ್ಪಿಸಬೇಕು.
"ಬೇವಕೂಫ್, ಲಂಡನ್‌ ಮರ್ಯಾದಸ್ತರ ಊರು. ನಿಮ್ಮ ಕಣ್ಣೆದುರೇ ಅಲ್ಲಿ ಅರಮನೆಯಲ್ಲಿ ಗಾರ್ಡುಗಳನ್ನು ನೋಡುತ್ತೀರಲ್ಲ. ಎಷ್ಟು ಚಂದಾಗಿ ಟೈಂಶೀರು ಡ್ನೂಟಿ ಇನ್ನೊಬ್ಬರಿಗೆ ಒಪ್ಪಿಸುತ್ತಾರೆ! ನೋಡಿಯಾದ್ರೂ ಕಲೀರಿ' ಎಂದು ಮೂಲಕ ಅಣತಿಮಾಡಿದಾಗ, ಇಬ್ಬರೂ ಹುಡುಗರು ಗಾರ್ಡ್‌ಗೊಂಬೆಗಳಂತೆ ಒಂದೇ ರೀತಿ ತಲೆ ಅಲ್ಲಾಡಿಸಿದರು. ಅದನ್ನು ಕಾರ್ಯರೂಪಕ್ಕೆ ತಂದರು ಕೂಡಾ. ಸಂಜೆ ಕರೆಕ್ಟ್ ಆರು ಗಂಟೆಗೆ ಲಚಮನ್‌, ಲತೀಫ‌ರು ಹತ್ತು ಹೆಜ್ಜೆ ನಿಧಾನವಾಗಿ ಪರಸ್ಪರರ ಕಡೆ ನಡೆದು ಶೇಕ್‌ಹ್ಯಾಂಡ್‌ ಮಾಡಿ, ಸೆಲ್ಯೂಟ್‌ ಹೊಡೆದು, ಬುಟ್ಟಿ ಒಪ್ಪಿಸಿ, ಎಬೌಟ್‌ಟರ್ನ್ ಆಗಿ ಬೇರೆ ಬೇರೆ ಹೋಗಿ ಬಿಡುತ್ತಿದ್ದರು. ದಿನವೂ ಆ ಹೊತ್ತು ಪಾರ್ಕಿನಲ್ಲಿರುವ, ಅಪರೂಪದಲ್ಲಿ ನಗುವ ಲಾರ್ಡ್‌ ಎಡ್ವರ್ಡರೂ ಅವರ ಗೆಳತಿ ಸಿಂಥಿಯಾಳೂ ಅದನ್ನು ನೋಡಿ ನೆಕ್‌ಟೈ ಸಡಿಲಿಸಿ ತುಂಬಾ ನಕ್ಕರು. ಅಂತೆಯೇ ನೆರೆದಿದ್ದ ಪ್ರೇಕ್ಷಕರು ಕೂಡಾ. ಈ ವಿನೋದದಿಂದ ವ್ಯಾಪಾರವೂ ಕುದುರಿತ್ತು.
ಭಲ್ಲಾ, ಬರೇ ಇಂತಹ ಚಿಲ್ಲರೆ ವ್ಯಾಪಾರ ಮಾತ್ರದ ಏಜಂಟಲ್ಲ. ಅವನೀಗ ದೊಡ್ಡ ಕುಳ. ತಲೆಮಾರುಗಳ ಹಿಂದೆ ವೆಸ್ಟ್‌ಇಂಡೀಸ್‌ ಎಸ್ಟೇಟುಗಳ ಲೆಕ್ಕಪತ್ರ ಬರೆಯಲು ಹೋದ ಭಲ್ಲಾ ಕುಟುಂಬ ಮುಂದೆ ರೊಕ್ಕಮಾಡಿ, ಇಂಗ್ಲಿಷ್‌ ಖಾರಿ ದೋಣಿಸಿ ಲಂಡನ್‌ನಲ್ಲಿ ಬೇರುಬಿಟ್ಟು , ಅಲ್ಲಿನ ಮೋಡ ಧಂಡಿಗಳಲ್ಲಿ ಹೆಚ್ಚು ಬಿಳಿಬಣ್ಣಗೊಂಡು, ಈಗ ಆಕ್ಸ್‌ಫ‌ರ್ಡ್‌ ಎಕ್ಸೆಂಟ್‌ನಲ್ಲಿ ಪಕ್ಕಾ ಇಂಗ್ಲಿಷ್‌ ಜಾಲಾಡಬಲ್ಲವನಾಗಿದ್ದ ಗುರುಮಿತ್‌ ಭಲ್ಲಾ. ಸೌತ್‌ಹಾಲಿನಲ್ಲಿ ಬಂಗ್ಲೆ ಖರೀದಿಸಿ, ಸಣ್ಣಾಗಿ ಆರಂಭಿಸಿದ ಜನರಲ್‌ ಸ್ಟೋರ್‌ ಬೆಳೆದು, ಥೇಮ್ಸ್‌ ನದಿ ದಡದಲ್ಲಿ ಅಲ್ಲಲ್ಲಿ ಚುಟ್ಟಾ , ಕಿರಾಣಿ ಅಂಗಡಿಗಳು, ಬೇಸ್‌ವಾಟರ್‌, ಪಿಕ್ಕಾಡೆಲಿಗಳಲ್ಲಿ ಪಬ್ಬುಗಳು, ಗ್ರೀನ್‌, ಹೈಡ್‌, ರೀಜೆಂಟ್‌ ಪಾರ್ಕುಗಳಲ್ಲಿ ಶೇಂಗಾ ಬಿಸ್ಕತ್ತು ಮಾರಾಟ ಮುಂತಾಗಿ ಅಂಗಡಿ ಚೈನುಗಳು ಉದ್ದವಾಗುತ್ತ ಹೋದುವು. ಅವುಗಳ ಮುನಾಫೆ ಜಮಾಯಿಸಿ ಮೆಂಚೆಸ್ಟರ್‌ನಲ್ಲಿ ಸಣ್ಣ ಕಾಟನ್‌ ಮಿಲ್ಲಿಗೂ ಫೌಂಡೇಶನ್‌ ಹಾಕಿದ್ದ. ಇದನ್ನು ಅವನ ಕೆಲ ನೆರೆಯ ಇಂಗ್ಲಿಷರೂ ಮೆಚ್ಚಿ "ಇಂಡಿಯಾ ಮಾಫಿಯಾ' ಎಂದು ನಗುತ್ತಿದ್ದರು. "ಲೆಝೇ ಫೇರ್‌, ಮುಕ್ತ ಮಾರುಕಟ್ಟೆ' ಸಿದ್ದಾಂತ ನಂಬಿದ್ದ ಆ ಜನರು. ಆದರೆ ಭಲ್ಲಾನನ್ನು ರೊಕ್ಕದ ಶೈಲಾಕ್‌ ಎಂದೇನೂ ಅನ್ನುವಂತಿಲ್ಲ. ಬದಲಿಗೆ, ಅವ ಉದಾರಿ. ಬಡವರ ಬಗ್ಗೆ ಕನಿಕರಿ. ಏನೇನೋ ರೀತಿ ವಲಸೆ ಬಂದ ಬಡ ಏಸಿಯನರಿಗೆ ತನ್ನಂಗಡಿ ಸರಮಾಲೆಯಲ್ಲಿ ನೌಕರಿ ಪೋಣಿಸಿ ಸ್ವಾರ್ಥಪರಾರ್ಥ ಎರಡೂ ಉದ್ಧರಿಸಿದ್ದ. ಅವನ ಮುಖ, ಹೇರ್‌ಕಟ್ಟಿಂಗ್‌ ಸೆಲೂನ್‌ ಕನ್ನಡಿಗಳ ಬಿಂಬಗಳ ಬಹುಮುಖ. ಗಾಂಧೀಜಿಯವರು ರೌಂಟ್‌ ಟೇಬಲ್‌ ಕಾನ್ಫರೆಂಸಿಗೆ ಬಂದಾಗ ಹುಡುಕಾಡಿ ಆಡಿನ ಹಾಲು ಕೊಟ್ಟಿದ್ದ. ವಲ್ಲಭ ಭಾç ಪಟೇಲರಿಗೆ ಕೋಟು ಖರೀದಿಸಲು ವಿಶ್ವಾಸಾರ್ಹ ಪಾರ್ಕ್‌ಸನ್‌ ರೆಡಿಮೇಡ್‌ ಅಂಗಡಿಗೆ ಒಯ್ದಿದ್ದ. ಅಷ್ಟೇ ಇಂಗ್ಲಿಷರ ಬಗ್ಗೆ ಶ್ರದ್ಧೆ ಕೂಡಾ, ಮಹಾಯುದ್ಧ ವಿರೋಧಿಸಿ ತಣ್ತೀಜ್ಞಾನಿ ರಸ್ಸೆಲ್ಲರು ಜೈಲುಗೊಂಡಾಗ, ಅವರ ವಿಚಾರ ಮೆಚ್ಚಿ ಟ್ಯೂಲಿಪ್‌ ಹೂಗುತ್ಛ ಜೈಲಿನಲ್ಲೇ ಅರ್ಪಿಸಿದ್ದ. ಕೇಂಬ್ರಿಜ್‌ನಲ್ಲಿ ಇಂಗ್ಲಿಷ್‌ ಪೋಸ್ಟ್‌ ಗ್ರಾಜುಯೇಟ್‌ ಫ‌ಸ್ಟ್‌ ಬಂದವರಿಗೆ ಮೆಡಲ್‌ ಇರಿಸಿದ್ದ. ಜತೆಗೆ ರಸಿಕ ಕೂಡಾ. ಚಂದ ಹೆಣ್ಣು ಮಕ್ಕಳೆಂದರೆ ಖುಷಿಗೊಂಡು, ಪ್ರಫ‌ುಲ್ಲನಾಗಿ ಒಮ್ಮೊಮ್ಮೆ ಸರಸವೂ ಆಡುತ್ತಿದ್ದ. ದಾಡಿ ಬೋಳಿಸಿದ ಪಗಡಿತೊರೆದ ಎತ್ತರ ಸುಂದರ ಹಸನ್ಮುಖೀ ಯುವಕ ಗುರುಮಿತ್‌ ಸಿಂಗ್‌ ಭಲ್ಲಾನ ನವುರು ಬೆಚ್ಚಗಿನ ಹೃದಯಕ್ಕೆ ಇಂಗ್ಲಿಷ್‌ ಹುಡುಗಿಯರೂ ಮೋಹಗೊಳ್ಳುತ್ತಿದ್ದರು.
ಇನ್ನು ಲಾರ್ಡ್‌ ಎಡ್ವರ್ಡರ ಬಗ್ಗೆ ಹೇಳ್ಳೋಣವೆಂದರೆ, ಅವರದ್ದು ಹೆಸರಾಂತ ಮನೆತನ. 1764ರಲ್ಲಿ ಮೊಗಲ್‌ ಆಲಿಗೌಹರ, ಔಧ ನವಾಬ ಮತ್ತು ಮೀರಕಾಸೀಮರು, ಬುಕ್ಸಾರ್‌ನಲ್ಲಿ ಈಸ್ಟ್‌ ಇಂಡಿಯಾ ಕಂಪೆನಿ ಜತೆ ಇದಿರು ಯುದ್ಧದಲ್ಲಿ ಸೋತರು. ಕಂಪೆನಿಯ ಸೈನ್ಯದಲ್ಲಿ ಒಬ್ಬ ಕ್ಯಾಪ್ಟನ್‌ ಆಗಿ ಒಂದೇ ಬಂದೂಕಿಂದ ವೈರಿಯ 101 ಕುದುರೆ ಹೊಡೆದಿದ್ದ ಸೀನಿಯರ್‌ ಎಡ್ವರ್ಡರು ರಾಣಿಯಿಂದ ವೀರ ಪದಕ ಪಡೆದು ನೈಟ್‌ ಪದವಿಯ ನಿಚ್ಚಣಿಕೆ ಏರಿದ್ದರು. ಅಂತಹ ಶೂರ ವಂಶದ ಆರನೇ ಕುಡಿ ಈ ಲಾರ್ಡ್‌ ಎಡ್ವರ್ಡರು. ಅವರಿಂದು ಗ್ರೀನ್‌ ಪಾರ್ಕಿಗೆ ಇತ್ತೀಚೆ ಅಪ್ಸರ್‌ಹೌಸ್‌ನಲ್ಲಿ ದೀರ್ಘ‌ ಚರ್ಚೆಗಳಿದ್ದಾಗೂ ಬರೂದು ತಪ್ಪಿಸುತ್ತಿಲ್ಲ. ಕನ್ಸರ್ವೆಟಿವ್‌ ಪಾರ್ಟಿಯ ಅವ ಕಚ್ಚೆಮಾತ್ರ ಸ್ವಲ್ಪ ಲಿಬರಲ್‌. ಅವರು ಚರ್ಚ್‌ ಆಫ್ ಇಂಗ್ಲೆಂಡದ ಕಟ್ಟಾ ಪ್ರೊಟೆಸ್ಟಂಟರಿದ್ದರೂ ಅವರ ಹೆಂಡತಿ ಮೇರಿ ಸ್ಟುವಾರ್ಟ್‌ ಐರ‌್ಲಂಡರ ಕ್ಯಾಥೊಲಿಕಳು.
ಪಾರ್ಕಿನಲ್ಲಿ ಆಗೀಗ ಒಬ್ಬ ಬಂಗಾರಗೂದಲಿನ ಅವರಿಗಿಂತ ಎಳೆ ವಯಸ್ಸಿನ ಸುಂದರ ಹುಡುಗಿಯೊಬ್ಬಳು ಅವರ ವಾಕಿಂಗ್‌ ಕಂಪೆನಿ ಕೊಡುತ್ತಿದ್ದಾಳೆ ಎಂಬಿತ್ಯಾದಿ ವಿಷಯಗಳು ಏನೋ ಒಂದು ನಿಗೂಢತೆ ಕಡೆ ಬಟ್ಟುಮಾಡಿ ತೋರಿಸುತ್ತವೆ. ಈ ನಿಗೂಢತೆಯ ಗುಣಕಾರ ಭಾಗಾಕಾರ ಮಾಡಿದರೆ ಸಿಗೂದು, ಅವರ ಜತೆ ವಾಕಿಂಗ್‌ ಪಾಲ್ಗೊಳ್ಳುವ ಹುಡುಗಿ ಸಿಂಥಿಯಾ ಲಾರೆನ್‌ ಎಂಬುದೇ ಒಂದು ಉತ್ತರ.
ಲಾರ್ಡ್‌ ಎಡ್ವರ್ಡರು ಕನ್ಸರ್ವೆಟಿವ್‌ ಪಾರ್ಟಿಯ ನಿಷ್ಠ ನಾಯಕರು. ಅವರು ಯುದ್ಧಕಾಲದಲ್ಲಿ ಪ್ರಧಾನಿ ಚರ್ಚಿಲರಿಗೆ ಗಟ್ಟಿ ಜತೆಗೊಟ್ಟು ಇಂಗ್ಲೆಂಡ್‌ ಅದ್ಭುತ ರೀತಿಯಲ್ಲಿ ಜಯಗೊಂಡಿತ್ತು. ಹಾಗಿದ್ದರೂ ಮುಂದೆ ಇಲೆಕ್ಷನ್‌ನಲ್ಲಿ ಕನ್ಸರ್ವೆಟಿವ್‌ ಚರ್ಚಿಲ್ಲರ ಬದಲು ಲಿಬರಲ್‌ ಆಟ್ಲೀ ಸರಕಾರ ಬಂದು, ಎಡ್ವರ್ಡರು ವಿರೋಧೀಪಕ್ಷದಲ್ಲಿ ಕೂಡುವಂತೆ ಆದದ್ದು ನಂಬಲಾರದ ಆಘಾತವೆಂದು ಚಿಂತಿತರಾಗಿದ್ದರು ಲಾರ್ಡರು. ಅವರೊಡನೆ ಅವರ ಹೆಂಡತಿ ಒಂದೆರಡು ಬಾರಿ ಕ್ಯಾಥೊಲಿಕ್‌ ವೆಟಿಕನ್‌ಗೆ ಯಾತ್ರೆ ಮಾಡಿದ್ದು, ತಮ್ಮ ಕೆಲ ಪ್ರೊಟೆಸ್ಟಂಟ ಮಿತ್ರರ ಮನಸ್ಸಿಗೆ ಬಂದಿಲ್ಲವೆನ್ನುವುದೂ, ಆಕೆ ಐರಿಷ್‌ ಡಬ್ಲಿನ್‌ ಊರಿಗೆ ಆಗೀಗ ಹೋಗೂದು, ಆಕೆಗೆ ಐರಿಷ್‌ ಪ್ರತ್ಯೇಕತಾವಾದಿಗಳ ಜತೆ ಗುಪ್ತ ಸಂಬಂಧವಿರಬಹುದೇನೋ ಅಥವಾ ಬೇರೊಬ್ಬ ಪ್ರಿಯಕರನಿರಬಹುದೋ ಎಂಬಿತ್ಯಾದಿ ಸಂದೇಹಗಳು ಕಾಡತೊಡಗಿದಾಗ ಅವರ ಸಂಸಾರದ ಬಿರುಕು ಅಗಲವಾಗತೊಡಗಿತು. ಇಂಥ ಆತ್ಮಸಂಘರ್ಷದಲ್ಲಿ, ಅಗಸ್ತ ಸಮ್ಮರ್‌ ಸೂರ್ಯನಂತೆ ಹ್ಯಾಂಡೆಲ್‌ ಒಪೇರಾ ಹಾಡುಗಾರ್ತಿ ಸಿಂಥಿಯಾ ಲಾರೆನ್‌ಳ ಸ್ನೇಹ ಲಘು ಪ್ರಣಯದ ಆಸರೆ ಸಿಕ್ಕಿತ್ತು. ಬಹಳ ವರುಷಗಳಿಂದ ದಣಿದ ಮೈಯಲ್ಲಿ ಲಾರ್ಡರು ಕನಸು ಕಾಣತೊಡಗಿದರು.
ಸಿಂಥಿಯಾ ಲಾರೆನ್‌ ನೀಲಗಣ್ಣಿನ ಬಂಗಾರಗೂದಲಿನ ಹಾಡುಹಕ್ಕಿಯಂಥ ಪಕ್ಕಾ ಸುಂದರ ಇಂಗ್ಲಿಷ್‌ ಹುಡುಗಿ. ಪಿಕ್ಕಾಡೆಲೀ ಒಪೇರಾದಲ್ಲಿ ಹಾಡುಹಕ್ಕಿಯಂಥ ಪಕ್ಕಾ ಪ್ರಿಯವಾದ ಹ್ಯಾಂಡೆಲ್‌, ಮೊಜಾರ್ಟ್‌ ಮುಂತಾಗಿ ಶಾಸ್ತ್ರೀಯ ಸಂಗೀತ ಹಾಡುವಳು. ಹಾಗೆಂದು ತಾನು ಶಾಸ್ತ್ರೀಯ ಹಾಡುಗಾರಳೆಂದು ಒಣ ಮಡಿವಂತಿಕೆಯಿಲ್ಲ. ಬಾತ್‌ರೂಮ್‌ನಲ್ಲಿ ಆಗಿನ ಪಾಪ್ಯೂಲರ್‌ "ಆನೀ ಗೆಟ್‌ ಯುವರ್‌ ಗನ್‌' ಸಿನೆಮಾ ಹಾಡನ್ನು ಯಾವಾಗಲೂ ಗುಣುಗುಣಿಸುವಳು. ಮುಕ್ತ ಮನಸ್ಸು , ಉಡುಗೆ ತೊಡುಗೆಯಲ್ಲೂ ಕೂಡಾ. ಕೆಲವೊಮ್ಮೆ ಹಳೇ ಇಂಗ್ಲಿಷ್‌ ಮರ್ಯಾದೆಯ ಉದ್ದ ಸ್ಕರ್ಟ್‌ ಕತ್ತು ಮುಚ್ಚುವ ಮೇಲಂಗಿ ತೊಟ್ಟರೆ, ಮತ್ತೂಮ್ಮೆ "ಕ್ರಿಶ್ಚಿಯನ್‌ ಡೋರ್‌ ನ್ಯೂಫೇಶನ್‌'ನಲ್ಲಿ ಕತ್ತು ಕೆಳಗಿಳಿದ ಟಾಪ್‌, ಮೊಣಕಾಲು ಮೇಲೇರುವ ಸ್ಕರ್ಟು ತೊಡುವಳು. ಮಜಾವೆಂದು ಕೆಲವೊಮ್ಮೆ ಇಂಡಿಯನ್‌ ಜಾಕೇಟೂ ತೊಡುವಳು. ಅವಳ ಏಸಿಯಾ ಬಗ್ಗೆ ಆಸಕ್ತಿಗೆ, 1857ರಲ್ಲಿ ಮುಂಬೈಯಲ್ಲಿ ನೌಕಾಬಂಡಾಯವಾಗುತ್ತಿದ್ದಾಗ ಆಕೆಯ ಮುತ್ತಜ್ಜ ಮದ್ರಾಸ್‌ ರೆಜಿಮೆಂಟ್‌ನಲ್ಲಿ ಅಡುಗೆ ಚಿಫ್ ಆಗಿದ್ದ ಎನ್ನೂದೂ ಕಾರಣವಿರಬಹುದು.
ಸಿಂಥಿಯಾ ಆಗೀಗ ಗ್ರೀನ್‌ ಪಾರ್ಕ್‌ಗೆ ಬರುತ್ತಿದ್ದಳು. ಒಮ್ಮೊಮ್ಮೆ ಲಚ್‌ಮನ್‌, ಲತೀಫ‌ರೊಡನೆ ನಗುತ್ತ ಶೇಂಗಾ ಕಡಲೆ ಮೆಲ್ಲುತ್ತ ಪಾರ್ಕ್‌ ತುಂಬಾ ಅಡ್ಡಾಡಿ, ಕೆಲವೊಮ್ಮೆ ಜಾಗಿಂಗ್‌ ಮಾಡುತ್ತಿದ್ದಳು. ಅಲ್ಲಿನ ಸರ್ವವರ್ಣೀಯರ ಹಗುರ ವಾತಾವರಣ ಆಕೆಗೆ ಪಸಂದಾಗಿತ್ತು. ಹಾಗಾಗಿ, ಒಪೇರಾದಲ್ಲಿ ತನ್ನ ಹಾಡಿಗೆ ಲಾರ್ಡ್‌ ಎಡ್ವರ್ಡರು ಗಂಭೀರವಾಗಿ ತಲೆದೂಗಿ, ಆಚೀಚೆ ನೋಡಿ ಮಿದುವಾಗಿ "ನನ್ನ ಜತೆ ಡಿನ್ನರಿಗೆ ಬರುವಿಯಾ ಮಿಸ್‌ ಲಾರನ್‌?' ಎಂದು ಆಮಂತ್ರಿಸಿದಾಗ, ಆಕೆ ನಕ್ಕು, "ಥ್ಯಾಂಕ್ಯೂ ಮೈ ಲಾರ್ಡ್‌, ಡಿನ್ನರಿಗೆ ಇನ್ನೊಮ್ಮೆ ಹೋಗೋಣ. ಈಗ ಬೇಕಿದ್ದರೆ ಪಾರ್ಕಿಗೆ ಬನ್ನಿ. ಅಡ್ಡಾಡಲು ಅಲ್ಲಿ ಚೆನ್ನಾಗಿದೆ ಸರಿ' ಅಂದಿದ್ದಳು. ಅಂದು ಲಾರ್ಡರ ಹೊಸ ಪ್ರಣಯದ ಶ್ರೀಗಣೇಶ.
ಇಬ್ಬರ ವಯಸ್ಸಿನಲ್ಲಿ ಅಂತರವಿದ್ದುದರಿಂದ ಸರಸದಲ್ಲಿ ಲಾರ್ಡರು ಉದಾರರಾದರು. ಬೆಲ್ಜಿಯಂ ವಜ್ರಹಾರ, ಜರ್ಮನಿಯ ಕೋಳಿಕೂಗುವ ಗಡಿಯಾರ, ಕೆನಡಾದ ಫ‌ರ್‌ಕೋಟು ಮುಂತಾಗಿ ಆಕೆಗೆ ಅರ್ಪಿಸಿ ಗಂಭೀರವಾಗಿ ಆಕೆ ಕೆನ್ನೆಗೆ ಮುತ್ತಿಡುವಾಗ ಅವರೊಳಗೊಂದು ಹೊಸ ಕನಸು ಜೀವನದ ಸಿನೆಮಾ ಪರದೆ ತೆರೆಯುತ್ತಿತ್ತು. ಲಾರ್ಡ್‌ರು, ಹೆಂಡತಿ ಮೇರಿ ಸ್ಟುವರ್ಟ್‌ ತವರು ಮನೆಗೆ ಹೋಗಿದ್ದಾಗ ನಾಟಿಂಗ್‌ಹಿಲ್‌ನ ತನ್ನ ಕ್ಯಾಸಲ್‌ ಬಂಗ್ಲೆಗೆ ಸಿಂಥಿಯಾಳನ್ನು ಹೊಸ ರಾಲ್ಸ್‌ರಾಯ್ಸ ಕಾರಲ್ಲಿ ಒಯ್ದ, ಬಾಲ್‌ರೂಂ ಫಾಕ್ಸ್‌ ಟ್ರಾಟ್‌ ಹೆಜ್ಜೆಮೇಳದಲ್ಲಿ ಅವಳೊಡನೆ ಡಾನ್ಸ್‌ ಮಾಡಿದಾಗ, ಮುಂದೆ ಹಳೆ ಹೆಂಡತಿಗೆ ಸೋಡಚೀಟಿ, ಹೊಸ ಮದುವೆಯ ಬ್ಲೂಪ್ರಿಂಟು ಮುಂತಾಗಿ ಗುಟ್ಟಾಗಿ ವಿಚಾರಗಳು ಕುಣಿಯತೊಡಗಿದುವು. ಸಿಂಥಿಯಾಳೂ ಅವರನ್ನು ಆಗೀಗ ತಬ್ಬಿಕೊಳ್ಳೂದು, ಮುತ್ತಿಡೂದು, ಆಕೆಯ ಮೆಚ್ಚಿನ ಪಬ್ಬುಗಳಲ್ಲಿ ಡಚ್‌ಬಿಯರ್‌, ಫ್ರೆಂಡ್‌ವೈನ್‌ ಪಾನಕ್ಕೆ ಕರೆದೊಯ್ಯೂದು ಮುಂತಾದ್ದು ಮಾಡೂದರಿಂದ, ಎಡ್ವರ್ಡರ ಗುಟ್ಟಿನ ಅಸ್ಪಷ್ಟ ಕನಸು ಲಾರ್ಡರ ತಲೆಯಲ್ಲಿ ಘನವಾಗತೊಡಗಿತು.
ಗುಟ್ಟಾಗಿದ್ದ ಈ ವಿಚಾರಕ್ಕೆ ಗಟ್ಟಿ ಸಾಕ್ಷಿಯಾಗಿದ್ದವರು ಶೇಂಗಾ ವ್ಯಾಪಾರ ಗಾರ್ಡುಗಳು ಲಚನ್‌ಮನ್‌ ಲತೀಫ‌ರು. ಅವರ ಗಾರ್ಡುತನ ಚೇಂಜಾಗುವಾಗ ಲಾರ್ಡರು ಲಾರೆನ್‌ಳಿಗೆ ಮುತ್ತಿಟ್ಟು ಮರುದಿನದವರೆಗೆ ಗುಡ್‌ಬೈ ಹೇಳೂದು ರೂಢವಾಗಿತ್ತು. ಹುಡುಗರು "ಕ್ಯಾಜೀ, ಮುದಿಹುಚ್ಚು! ಆ ಚಲೋ ಚಿಕ್ಕ ಛೋಕರಿಗೆ ಗಂಟು ಬಿದ್ದಾನಲ್ಲ!' ಎಂದು ಗುಟ್ಟಾಗಿ ನಗುತ್ತಿದ್ದರು.
.
ಲಾರ್ಡ್‌ರು ಒಂದು ಆಳಸಂತಸದ ಸಾಗರದಲ್ಲಿ ಈಜಾಡುತ್ತಿದ್ದರು. ಎರಡನೇ ಮಹಾಯುದ್ಧ ಮುಗಿದು ಎರಡು ವರ್ಷ ಆಗಿ, ಬಾಂಬುಗಳು ಕುಟ್ಟಿದ್ದ ಕಟ್ಟಡಗಳನ್ನು ಮತ್ತೆ ತಲೆಯೆತ್ತಿ, ಲಂಡನಿನ ಜೀವನ ಸುಂದರವಾಗಿ ಅರಳಿತ್ತು. ಅಲ್ಲದೆ, ಆ ವರ್ಷದ ಜುಲೈ ಆಗಸ್ಟ್‌ ತಿಂಗಳ ಬೇಸಗೆಯೂ ಹಿತವಾಗಿ ಬೆಚ್ಚಗಾಗಿತ್ತು. ಪಾರ್ಕ್‌ ತುಂಬ ಟ್ಯೂಲಿಪ್‌, ಲಿಲ್ಲೀ, ಗುಲಾಬಿ, ಆರ್ಕಿಡ್‌ ಹೂಗಳು ಮದುವಣಗಿತ್ತಿಯರಂತೆ ಬಣ್ಣ ಬಣ್ಣಗೊಂಡಿದ್ದುವು. ಮೇಫ್ಲವರುಗಳು ನೆಲತುಂಬಿ ಕೆಂಪು ಹಳದಿ ಪಕಳೆ ಕಾಪೆìಟ್‌ ಹಾಸಿದ್ದವು. ಹತ್ತಿರದ ಲಾಂಗ್‌ ವಾಟರ್‌ ರೌಂಡ್‌ಪೌಂಡ್‌ ಕೆರೆಗಳಲ್ಲಿ, ಚಳಿಗೆ ವಲಸೆ ಹೋಗಿದ್ದ ಹಂಸ ಬಾತುಗಳು ಮರಳಿ, ಆಟಾಡುತ್ತ ಮತ್ತೆ ಸಂಸಾರ ನಡೆಸತೊಡಗಿದ್ದವು.
ಆಗಸ್ತಿನ ಮೊದಲ ದಿನಗಳು, ಸಂಜೆ ಸೂರ್ಯನ ಕಿತ್ತಳೆ ಬಿಸಿಲು ಸಿಂಥಿಯಾಳ ಬಂಗಾರಗೂದಲನ್ನು ಇನ್ನೂ ಹೊಳಪಿಸಿದಾಗ ಲಾರ್ಡರು ಅವಳ ಕೈಯನ್ನು ತನ್ನ ಬೊಗಸೆಯಲ್ಲಿ ಬಿಗಿಹಿಡಿದು, ತೇವಗೊಂಡ ಪ್ರೀತಿಗಣ್ಣಲ್ಲಿ ಆಕೆಯ ನೀಲಿಗಣ್ಣನ್ನೇ ದಿಟ್ಟಿಸುತ್ತ, ಹೌಸ್‌ ಆಫ್ ಲಾರ್ಡ್ಸ್‌ ಭಾಷಣಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿ ವಿನಂತಿಸಿದರು. "ಮಿಸ್‌ ಸಿಂಥಿಯಾ, ನಿನಗೆ ಖಾತ್ರಿ ತಿಳಿದಿದೆ. ನಾನು... ನಾನು ನಿನ್ನನ್ನು ಪ್ರೇಮಿಸಿದ್ದೇನೆ. ಮೈಗಾಡ್‌! ಅಂತೆಯೇ ನೀನು ಕೂಡಾ. ಹಾಗಾಗಿ... ಅಂತಾಗಿ... ನನಗೆ ನಿನ್ನನ್ನು ಮದುವೆಯಾಗುವ ಗ್ಲೋರಿಯನ್ನು ದಯಪಾಲಿಸು. ಐ ಸ್ವೇರ್‌, ನೀನಿಲ್ಲದೆ ನನ್ನ ಜೀವನ ಥೇಮ್ಸ್‌ ನದಿಯಿಲ್ಲದ ಲಂಡನ್‌ನಂತೆ ಅರ್ಥಹೀನ. ನಿನ್ನ ಬಿಟ್ಟಿರಲಾರೆ ಮಿಸ್‌ ಸಿಂಥಿಯಾ...' ಎಂದರು. ಕೆಲ ನಿಮಿಷ ಮೌನಳಾಗಿ ಸಿಂಥಿಯಾ ಮತ್ತೆ ನಸುನಕ್ಕು, "ಹೌದಾ, ಹೌದಾ, ಮೈ ಲಾರ್ಡ್‌?' ಎಂದು ಅವರ ಬೆನ್ನುಪೂಸಿದಳು.
ಲಾರ್ಡ್‌ರು ಪ್ರಸನ್ನರಾಗಿ, "ನಾನು ಫೋರ್ಚುನೇಟು. ಆದರೂ ನೀನೂ ಕೆಲದಿನ ವಿಚಾರಮಾಡು. ನಮ್ಮದು ವಿಚಾರ ಸ್ವಾತಂತ್ರ್ಯ ನಂಬಿದ ಇಂಗ್ಲಿಷ್‌ ದೇಶ... ಮುಂದಿನ ವಾರ ಇದೇ ದಿನ ಇಲ್ಲೇ ನಿನ್ನ ಒಪ್ಪುಗೆಯ ನಿರ್ಧಾರವನ್ನು ಕೊಡು, ಡಾರ್ಲಿಂಗ್‌ ಸಿಂಥಿಯಾ' ಎಂದು ಆಕೆಯನ್ನು ಮುತ್ತಿಟ್ಟು ಮರಳಲು ಹೆಜ್ಜೆ ಹಾಕಿದರು. ಆಗ ಇದನ್ನೇ ಒರೆಕಣ್ಣಿಂದ ನೋಡುತ್ತ ಶೇಂಗಾ ಹುಡುಗರ ಚೇಂಜ್‌ ಆಫ್ ಗಾರ್ಡ್‌ ನಡೆದಿತ್ತು.
ಮುಂದಿನ ವಾರದ ಸಂಜೆಯೂ ಬಂದೇಬಂತು. ಸಾಮಾನ್ಯವಾಗಿರುವ ಮಳೆಮೋಡಗಳ ಕಿರಿಕಿರಿಯಿಲ್ಲದೆ ಎಂಥ ಈ ಸುಂದರ ಸಮ್ಮರ್‌ ಬಂತೆಂದು ಲಂಡನ್‌ ಮಂದಿ ಹೇಳುತ್ತಿದ್ದರು. ತಂಪು ಸೂರ್ಯನ ಸಂಜೆಕಿರಣ ಪಾರ್ಕನ್ನು ನೆಯ್ದಿತ್ತು. ಆ ದಿನ ನೀಟಾಗಿ ಶೇವ್‌ ಮಾಡಿ ಚಾನೆಲ್‌ ಸೆಂಟು ಪೂಸಿ, ಫ್ರಾಕ್‌ಕೋಟು, ಟಾಪ್‌ ಹ್ಯಾಟ್‌, ಅಗಲ ಪ್ಯಾಂಟು, ವಾಕಿಂಗ್‌ ಸ್ಟಿಕ್‌ಗಳೊಡನೆ ಲಾರ್ಡ್‌ ಎಡ್ವರ್ಡರು ಎಂದಿಗಿಂತ ತಾಸು ಮೊದಲೇ ಬಂದು ತವಕದೊಡನೆ ಬೆಂಚಿನ ಮೇಲೆ ಆಸೀನರಾಗಿದ್ದರು. ಕಾಕತಾಳೀಯವೆಂಬಂತೆ ಆ ದಿನ ಶೇಂಗಾ ಹುಡುಗರ ಮಾಲಕ ಗುರುಮಿತ್‌ ಭಲ್ಲಾನೂ ಹುಡುಗರನ್ನು ಮಾತಾಡಿಸಿ ಹೋಗೋಣವೆಂದು ಪಾರ್ಕಿಗೆ ಬಂದಿದ್ದ. ಷರಾಯಿ ನೆಹರೂ ಜಾಕೇಟು ಹಾಕಿಕೊಂಡು ಚಂದವೂ ಕಾಣುತ್ತಿದ್ದ. ಹುಡುಗರೊಡನೆ ವ್ಯಾಪಾರದ ಬಗ್ಗೆ ಮಾತನಾಡುತ್ತ, ಅವರು ಪಗಾರ ಒಂದಿಷ್ಟು ಹೆಚ್ಚಿಸಬೇಕೆಂಬ ವಿನಂತಿಗೆ ನಕ್ಕು ಸಾಂಕ್ಷನ್‌ ಕೊಟ್ಟು , ಸಂಜೆ ಬಿಸಿಲಲ್ಲಿ ಖುಷಿಗೊಂಡು ಅಲ್ಲಲ್ಲಿ ಅಡ್ಡಾಡಿದ.
ಪಕ್ಕಾ ಇಂಗ್ಲಿಷ್‌ ಟೈಮ್‌ನಂತೆ ಲಾರೆನ್‌ಳು ಬಂದು ಲಾರ್ಡರಿಗೆ ಮುತ್ತಿಟ್ಟು ಬಾಜೂ ಕುಳಿತುಕೊಂಡಳು. ಇಬ್ಬರೂ ಖುಷಿಯ ಮಂದಹಾಸ ಬೀರಿ, ಕೆಲಕಾಲ ಮೌನವಾಗಿ, ಸಂಜೆ ವೀಕ್ಷಿಸಿದರು. ಶೇಂಗಾ ಹುಡುಗರು ಗಾರ್ಡ್‌ಚೇಂಜ್‌ ಮಾಡಲು ಕಾಯುವುದನ್ನು ಕಂಡರು. ಲಾರ್ಡ್‌ ಎಡ್ವರ್ಡರು ಕೊನೆಗೆ ಕೆಮ್ಮಿ, "ಡಾರ್ಲಿಂಗ್‌ ವಿಚಾರ ಮಾಡಿದಿಯಾ?... ಮದುವೆ ದಿನವನ್ನು ಆಮೇಲೆ ನಮಿºಬ್ಬರ ಅನುಕೂಲ ನೋಡಿ ಫಿಕ್ಸ್‌ ಮಾಡೋಣ... ಮೊದಲು ನಮಿºಬ್ಬರಿಗೇ ತಿಳಿಯುವಂತೆ ಎಂಗೇಜ್‌ಮೆಂಟ್‌ ಮಾಡಿಕೊಳ್ಳೋಣ ಡಿಯರ್‌' ಎಂದರು. ಲಾರೆನ್‌ ಕೆಲ ನಿಮಿಷ ಮೌನವಾಗಿ ಉಳಿದಳು. ಮತ್ತೆ ನಿಧಾನವಾಗಿ, "ಡೀಯರ್‌ ಲಾರ್ಡ್‌, ನನ್ನ ಮೇಲೆ ಪ್ರೀತಿಯಿದ್ದರೆ, ಅತಿಭಾವುಕರಾಗದೆ ನನ್ನ ಮಾತು ಕೇಳವಿರಾ?... ನಿಮ್ಮ ಬಗ್ಗೆ ನನಗೆ ಸ್ನೇಹ ಇದೆ. ಆದರೆ ಅದು ಮದುವೆಯಾಗುವ ಪ್ರೀತಿಯಲ್ಲ...' ಲಾರ್ಡ್‌ರು ಎದೆಯೊಳಗೆ ಏನೋ ಐಸುಗೊಂಡಂತೆ ತಲ್ಲಣಗೊಂಡರು. ಎಲ್ಲೆಡೆ ಥಂಡಿ ಮಬ್ಬು ಪಸರಿಸಿದಂತೆ ಕಾಣತೊಡಗಿತು. ಸಿಂಥಿಯಾ ಲಾರೆನ್‌ ಮತ್ತೆ ಮುಂದುವರಿಸಿ, "ಕ್ಷಮಿಸಿ ಮೈಲಾರ್ಡ್‌, ನಿಮಗೆ ಸುಳ್ಳು ಹೇಳಲಾರೆ. ನನಗೆ ಈಗಾಗಲೇ ಒಬ್ಬ ಬಾಯ್‌ಫ್ರೆಂಡ್‌ ಇದ್ದಾನೆ. ಮದುವೆಯಾಗುವುದೆಂದೂ ನಾವು ನಿಶ್ಚಯ ಮಾಡಿದ್ದೇವೆ... ದಯವಿಟ್ಟು ಕ್ಷಮಿಸಿ'. ಲಾರ್ಡ್‌ ಕಂಗಾಲಾಗಿ, ಹೃದಯದಲ್ಲಿ ಕಂಪಿಸಿ, ಮನದೊಳಗೇ "ಶಿಟ್‌' ಅಂದರು. ಸಿಂಥಿಯಾ "ನನ್ನ ಬಾಯ್‌ಫ್ರೆಂಡ್‌ ಇಲ್ಲೇ ಇದ್ದಾನೆ, ಪರಿಚಯಿಸುತ್ತೇನೆ' ಎಂದು ಶೇಂಗಾ ಹುಡುಗರ ಕಡೆ ನಡೆದಳು. ಅವರ ಬುಟ್ಟಿ ವ್ಯಾಪಾರದ "ಚೇಂಜ್‌ ಆಫ್ ಗಾರ್ಡ್ಸ್‌' ನಡೆದಿತ್ತು. ಅದನ್ನು ನೋಡುತ್ತ, ಯುದ್ಧ ಮುಗಿದೆರಡು ವರ್ಷದ, ಲಂಡನ್ನಿನ ಅಗಸ್ತದ ಸಮ್ಮರ್‌ ಸಂಜೆ ಬಿಸಿಲಲ್ಲಿ ನಗುತ್ತ ಗುರುಮಿತ್‌ ಸಿಂಗ್‌ಭಲ್ಲಾ ನಿಂತಿದ್ದ. ಸಿಂಥಿಯಾ ಅವನಿಗೆ ಮುತ್ತಿಟ್ಟು ತೋಳುತೋಳು ಹಿಡಿದುಕೊಂಡು ಅವರಿಬ್ಬರೂ ಲಾರ್ಡ್‌ ಎಡ್ವರ್ಡರ ಕಡೆ ಬಂದರು. ಮುಗುಳ್ನಗುವ ಭಲ್ಲಾನನ್ನು ಎಡ್ವರ್ಡರಿಗೆ ಪರಿಚಯಿಸುತ್ತ "ವೆೆುçಲಾರ್ಡ್‌, ಇವ ಮಿಸ್ಟರ್‌ ಗುರುಮಿತ್‌ ಭಲ್ಲಾ. ನನ್ನ ಬಾಯ್‌ಫ್ರೆಂಡ್‌. ನನಗೆ ತುಂಬಾ ಮೆಚ್ಚುಗೆಯಾದ ಹುಡುಗ. ಹೇ ಭಲ್ಲಾ, ಇವರು ನನ್ನ ಹಿರೇ ಗೆಳೆಯರು, ಲಾರ್ಡ್‌ ಎಡ್ವರ್ಡರು' ಎಂದಾಗ, ಸಜ್ಜನಿಕೆಯ ಇಂಗ್ಲಿಷ್‌ ಲಾರ್ಡರು, ತಮ್ಮ ಎದೆಯೊಳಗಿನ ಬಿರುಗಾಳಿಯನ್ನು ಗಟ್ಟಿಯಾಗಿ ಒತ್ತಿಟ್ಟು, ಏನೂ ತೋರಗೊಡದೆ, ಶೇಕ್‌ಹ್ಯಾಂಡ್‌ ಮಾಡುತ್ತ "ಹಲೋ ಮೈ ಬಾೖ, ಮಿಸ್ಟರ್‌ ಭಲ್ಲಾ, ಹೌಡುಯುಡೂ...' ಎನ್ನುವಾಗ, ಹಿನ್ನೆಲೆಯಲ್ಲಿ ಶೇಂಗಾ ಹುಡುಗರ "ಚೇಂಜ್‌ ಆಫ್ ಗಾರ್ಡ್‌' ನಡೆದಿತ್ತು.
- ಆರ್ಯ

Comments

Popular Posts